Sunday, February 11, 2024

'ಕೆಂಡಸಂಪಿಗೆ'ಯಲ್ಲಿ ನನ್ನ “ಲೋಕ ಕಾವ್ಯ ವಿಹಾರ” ಸರಣಿ - ೧ - ಎಸ್ಟೋನಿಯಾ ದೇಶದ ಕವಿ ಯುಹಾನ್ ವೀಡಿಂಗ್‌ರ (Juhan Viiding)

ಗೊಂದಲಮಯ ದ್ವಂದ್ವಾರ್ಥತೆಗಳು ಮತ್ತು ದೃಷ್ಟಿಕೋನದ ಕ್ಷಿಪ್ರ ಬದಲಾವಣೆಗಳನ್ನೊಳಗೊಂಡ ವೀಡಿಂಗ್-ರ ವಿಕೇಂದ್ರಿತ, ಸಾಂಕೇತಿಕ ಮತ್ತು ಬಹುತಾರ್ಕಿಕ ಕಾವ್ಯಶೈಲಿ 1970-ರ ಮತ್ತು 80-ರ ದಶಕಗಳಲ್ಲಿ ಎಸ್ಟೋನಿಯಾದಲ್ಲಿ ಬರೆಯುತ್ತಿದ್ದ ಹೆಚ್ಚಿನ ಯುವ ಕವಿಗಳಿಗೆ ಸಾರ್ವತ್ರಿಕ ಉಲ್ಲೇಖಬಿಂದುಗಳಾಗಿದ್ದವು. ಬೇರೆ ಯಾವುದೇ ಎಸ್ಟೋನಿಯನ್ ಕವಿ ಈ ತರಹದ ಅನುಕರಣೆಗಳ, ಪ್ರಸ್ತಾಪಗಳ ಮತ್ತು ಮರುರೂಪಿಸುವಿಕೆಗಳ ಹರಿವನ್ನು ಸೃಷ್ಟಿಸಿಲ್ಲ: ಯುಹಾನ್ ವೀಡಿಂಗ್ ತಯಾರಿಸಿದ ಕಾವ್ಯದ ಅಚ್ಚಿನಲ್ಲಿ ಒಂದು ಇಡೀ ಪೀಳಿಗೆಯ ಕಾವ್ಯಭಾಷೆ ರೂಪುಗೊಂಡಿತು.
ಎಸ್.‌ ಜಯಶ್ರೀನಿವಾಸ ರಾವ್ ಬರೆಯುವ ಜಗತ್ತಿನ ಬೇರೆ ಬೇರೆ ಭಾಷೆಯ‌ ಕವಿಗಳ ಬದುಕು- ಅನುವಾದಿತ ಕವಿತೆಗಳ ಸರಣಿ “ಲೋಕ ಕಾವ್ಯ ವಿಹಾರ” ಇಂದಿನಿಂದ, ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ

https://kendasampige.com/ಎಸ್-ಜಯಶ್ರೀನಿವಾಸ-ರಾವ್-ಬರೆ/


ಎಸ್ಟೋನಿಯಾ ದೇಶದ ಕವಿ ಯುಹಾನ್ ವೀಡಿಂಗ್‌ರ (Juhan Viiding) 

ಕೆಲವೊಮ್ಮೆ ಒಂದು ಭಾಷೆಯ ಕಾವ್ಯಶೈಲಿಯ ಮೇಲೆ ಒಬ್ಬ ಕವಿಯ ಪ್ರಭಾವ ಎಷ್ಟು ಅಗಾಧವಾಗಿರುತ್ತದೆಂದರೆ ಆ ಪ್ರಭಾವ ಬಹಳ ವರ್ಷಗಳ ಕಾಲ ಆ ಕಾವ್ಯಲೋಕದಲ್ಲಿ ಪ್ರಬಲವಾಗಿರುತ್ತದೆ. 1948-ರಲ್ಲಿ ಜನಿಸಿದ ಎಸ್ಟೋನಿಯಾ ದೇಶದ ಕವಿ ಯುಹಾನ್ ವೀಡಿಂಗ್-ರ (Juhan Viiding) ಸಂದರ್ಭದಲ್ಲಿ ಹೇಳುವುದಾದರೆ ಈ ಮಾತು ನೂರಕ್ಕೆ ನೂರು ಸತ್ಯ.

ಗೊಂದಲಮಯ ದ್ವಂದ್ವಾರ್ಥತೆಗಳು ಮತ್ತು ದೃಷ್ಟಿಕೋನದ ಕ್ಷಿಪ್ರ ಬದಲಾವಣೆಗಳನ್ನೊಳಗೊಂಡ ವೀಡಿಂಗ್-ರ ವಿಕೇಂದ್ರಿತ, ಸಾಂಕೇತಿಕ ಮತ್ತು ಬಹುತಾರ್ಕಿಕ ಕಾವ್ಯಶೈಲಿ 1970-ರ ಮತ್ತು 80-ರ ದಶಕಗಳಲ್ಲಿ ಎಸ್ಟೋನಿಯಾದಲ್ಲಿ ಬರೆಯುತ್ತಿದ್ದ ಹೆಚ್ಚಿನ ಯುವ ಕವಿಗಳಿಗೆ ಸಾರ್ವತ್ರಿಕ ಉಲ್ಲೇಖಬಿಂದುಗಳಾಗಿದ್ದವು. ಬೇರೆ ಯಾವುದೇ ಎಸ್ಟೋನಿಯನ್ ಕವಿ ಈ ತರಹದ ಅನುಕರಣೆಗಳ, ಪ್ರಸ್ತಾಪಗಳ ಮತ್ತು ಮರುರೂಪಿಸುವಿಕೆಗಳ ಹರಿವನ್ನು ಸೃಷ್ಟಿಸಿಲ್ಲ: ಯುಹಾನ್ ವೀಡಿಂಗ್ ತಯಾರಿಸಿದ ಕಾವ್ಯದ ಅಚ್ಚಿನಲ್ಲಿ ಒಂದು ಇಡೀ ಪೀಳಿಗೆಯ ಕಾವ್ಯಭಾಷೆ ರೂಪುಗೊಂಡಿತು.

ವೀಡಿಂಗ್-ರ ಸಾಹಿತ್ಯ ಪಯಣ 1968-ರಲ್ಲಿ Realistliku Ingli Laul (‘The Song of a Realistic Angel’) ಎಂಬ ಕವನ-ಸಂಕಲನದ ಪ್ರಕಟಣೆಯೊಂದಿಗೆ ಪ್ರಾರಂಭವಾಯಿತು. 1971-ರಲ್ಲಿ ಪ್ರಕಟವಾದ Närvitrükk (‘Nerve Print’) ಕವನ ಸಂಕಲನದಿಂದ ಅವರ ಕಾವ್ಯ ಹೆಚ್ಚಿನ ಜನಕ್ಕೆ ಪರಿಚಯವಾಯಿತು. ಈ ಕವನ ಸಂಕಲನದಲ್ಲಿ ಮೊದಲ ಬಾರಿಗೆ ಪ್ರಕಟವಾಗುತ್ತಿರುವ ಎರಡು ಕವಿಗಳ ಕವನಗಳ ಜತೆಗೆ ವೀಡಿಂಗರ ಕವನಗಳು ಪ್ರಕಟವಾದವು. ಅದೇ ವರ್ಷ (1971), ಯುಹಾನ್ ವೀಡಿಂಗ್-ರು ‘ಯೂರಿ ಊಡಿ’ (Jüri Üdi) ಎಂಬ ಕಾವ್ಯನಾಮದಡಿಯಲ್ಲಿ Detsember (‘December’) ಎಂಬ ಮೊದಲ ಕವನ ಸಂಕಲನವನ್ನು ಪ್ರಕಟಿಸಿದರು. ‘ಯೂರಿ ಊಡಿ’ ಸುಮ್ಮನೆ ಹೆಸರಿಗೆ ಕಾವ್ಯನಾಮವಾಗಿರದೆ, ಕವಿಯೇ ಪ್ರಜ್ಞಾಪೂರ್ವಕವಾಗಿ ಸೃಷ್ಟಿಸಿದ ಮತ್ತು ಚಿತ್ರಿಸಿದ ‘ಆಲ್ಟರ್ ಈಗೊ’ ಆಗಿತ್ತು. ಯೂರಿ ಊಡಿ-ಯಾಗಿಯೆ ಅವರು Käekäik (‘Well-being’, 1973), Selges eesti keeles (‘In Plain Estonian’, 1974), ಮತ್ತು Armastuskirjad (‘Love Letters’, 1975) ಕವನ ಸಂಕಲನಗಳನ್ನು ಪ್ರಕಟಿಸಿದರು. 1978-ರಲ್ಲಿ Ma olin Jüri Üdi (‘I Was Jüri Üdi’ – ನಾನು ಯೂರಿ ಊಡಿಯಾಗಿದ್ದೆ) ಶೀರ್ಷಿಕೆಯ ‘ಯೂರಿ ಊಡಿಯ ಸಮಗ್ರ ಕವನ’ಗಳ ಸಂಕಲನವನ್ನು ಪ್ರಕಟಿಸಿ ವೀಡಿಂಗ್ ಅವರು ‘ಯೂರಿ ಊಡಿ’ಯಾಗಿ ತಮ್ಮ ಸೃಜನಾತ್ಮಕ ಪಯಣವನ್ನು ಮುಗಿಸಿದರು. ಇದೇ ಸಂಕಲನದ ಕೊನೆಯಲ್ಲಿ Poems by Juhan Viiding ಹೆಸರಿನ ಕಾವ್ಯ ಮಾಲೆಯ ಮೂಲಕ ವೀಡಿಂಗ್‌ರು ತಮ್ಮ ಮುಂದಿನ ಕಾವ್ಯಪಯಣದ ಸೂಚನೆ ನೀಡಿದರು. ಮುಂದೆ ಅವರು ತಮ್ಮ ಸ್ವಂತ ಹೆಸರಿನಿಂದಲೇ Elulootus (‘Hope for Life’, 1980) ಮತ್ತು Tänan ja palun (‘Blessing and Pleading’, 1983) ಸಂಕಲನಗಳನ್ನು ಪ್ರಕಟಿಸಿದರು; ಅವರ ಆಯ್ದ ಕವನಗಳ ಸಂಗ್ರಹ, Osa (‘A Part’) 1991-ರಲ್ಲಿ ಪ್ರಕಟವಾಯಿತು. ಇದರ ನಂತರ, ಯುಹಾನ್ ವೀಡಿಂಗ್ ಹೆಚ್ಚು ಬರೆದಂತೆ ಕಾಣುವುದಿಲ್ಲ. ತಮ್ಮ ಹಿಂದಿನ ತಲೆಮಾರಿನ ಕವಿಗಳಿಗಿಂತ ಭಿನ್ನವಾಗಿದ್ದ ವೀಡಿಂಗ್-ರು ಯಾವುದೇ ಪ್ರಬಂಧಗಳು ಅಥವಾ ವಿಮರ್ಶಾ ಲೇಖನಗಳನ್ನು ಬರೆಯಲಿಲ್ಲ. 1995-ರಲ್ಲಿ ಯುಹಾನ್ ವೀಡಿಂಗ್ ಆತ್ಮಹತ್ಯೆ ಮಾಡಿಕೊಂಡರು. ಯುಹಾನ್ ವೀಡಿಂಗ್‌ರ (‘ಯೂರಿ ಊಡಿ’ ಹೆಸರಿನಡಿಯಲ್ಲಿ ಬರೆದ ಕವನಗಳನ್ನು ಸಹ ಸೇರಿಸಿ) ಸಮಗ್ರ ಕವನ ಸಂಕಲನವನ್ನು [Kogutud Luuletused (‘Collected poems’)] ಎಸ್ಟೋನಿಯಾದ ಹೆಸರಾಂತ ಆಧುನಿಕ ಕವಿ ಹಾಸೊ ಕ್ರಲ್-ರವರು (Hasso Krull) ಸಂಪಾದಿಸಿ, 1998-ರಲ್ಲಿ ಮರಣೋತ್ತರವಾಗಿ ಪ್ರಕಟಿಸಿದರು.

ಅಕ್ಟೋಬರ್ 1980-ರಲ್ಲಿ, ನಲವತ್ತು ಬುದ್ಧಿಜೀವಿಗಳ ಪತ್ರಕ್ಕೆ ಸಹಿ ಹಾಕಿದ ಪ್ರಮುಖರಲ್ಲಿ ವೀಡಿಂಗ್ ಸಹ ಒಬ್ಬರು. ಈ ಪತ್ರದಲ್ಲಿ ನಲವತ್ತು ಪ್ರಮುಖ ಎಸ್ಟೋನಿಯನ್ ಬುದ್ಧಿಜೀವಿಗಳು ಎಸ್ಟೋನಿಯನ್ ಭಾಷೆ ಮತ್ತು ಸಂಸ್ಕೃತಿಯ ಸಂರಕ್ಷಣೆಗಾಗಿ ಕರೆಕೊಟ್ಟರು ಹಾಗೂ ಎಸ್ಟೋನಿಯನ ಭಾಷೆಯ ಮತ್ತು ಸಂಸ್ಕೃತಿಯ ಮೇಲೆ ರಶಿಯಾ ಹೇರಿದ ‘ರಶಿಯನೀಕರಣ’ (Russification) ನೀತಿಗಳನ್ನು ಪ್ರತಿಭಟಿಸಿದರು.

1968 ಮತ್ತು 1972-ರ ನಡುವೆ, ವೀಡಿಂಗ್‌ರು ಟ್ಯಾಲಿನ್ ಕನ್ಸರ್ವೇಟರಿಯಲ್ಲಿ (ಈಗ ಎಸ್ಟೋನಿಯನ್ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಥಿಯೇಟರ್) ರಂಗಭೂಮಿ ಮತ್ತು ರಂಗಕೌಶಲ ಕಲೆಯನ್ನು ಅಧ್ಯಯನ ಮಾಡಿದರು. 1972-ರಲ್ಲಿ ಪದವಿ ಪಡೆದ ನಂತರ, ವೀಡಿಂಗ್-ರು ಟ್ಯಾಲಿನ್‌ನ ನ್ಯಾಷನಲ್ ಡ್ರಾಮಾ ಥಿಯೇಟರ್‌ನಲ್ಲಿ (ಈಗ ಎಸ್ಟೋನಿಯನ್ ಡ್ರಾಮಾ ಥಿಯೇಟರ್) ಕೆಲಸ ಮಾಡಿದರು. ಅವರ ಜೀವನದ ಕೊನೆಯ ಹತ್ತು ವರ್ಷಗಳಲ್ಲಿ ವೀಡಿಂಗ್ ಅನೇಕ ನಾಟಕಗಳನ್ನು ಪ್ರದರ್ಶಿಸಿದರು. ಸ್ಯಾಮ್ಯುಯೆಲ್ ಬೆಕೆಟ್, ಯುಜೀನ್ ಐಯೊನೆಸ್ಕೊ ಮತ್ತು ಮಿನೋರು ಬೆಟ್ಸುಯಾಕು ಇವರ ಮೆಚ್ಚಿನ ನಾಟಕಕಾರರಾಗಿದ್ದರು. ತಮ್ಮ ಕೊನೆಯ ದಿನಗಳವರೆಗೂ ಅವರು ಎಸ್ಟೋನಿಯನ್ ಡ್ರಾಮಾ ಥಿಯೇಟರ್‌ನಲ್ಲಿ ಸಕ್ರಿಯರಾಗಿದ್ದರು.

ಯುಹಾನ್ ವೀಡಿಂಗ್ ಅವರಿಗೆ 1978-ರಲ್ಲಿ ಆಂಟ್ಸ್ ಲೌಟರ್ ನಟ ಪ್ರಶಸ್ತಿ (Ants Lauter Actor Award), 1984-ರಲ್ಲಿ ಯುಹಾನ್ ಸ್ಮುಲ್ ಸಾಹಿತ್ಯ ಪ್ರಶಸ್ತಿಯನ್ನು (Juhan Smuul Literary Prize) ಅವರ ‘ತನನ್ ಯಾ ಪಲುನ್’ Tänan ja palun ಸಂಗ್ರಹಕ್ಕಾಗಿ ಮತ್ತು 1985-ರಲ್ಲಿ “ಸೂವ್” (‘A Wish’) ಕವಿತೆಗಾಗಿ ಯುಹಾನ್ ಲೀವ್ ಕವನ ಪ್ರಶಸ್ತಿಯನ್ನು (Juhan Liiv Poetry Award) ನೀಡಲಾಯಿತು.

ಇಲ್ಲಿರುವ ಯುಹಾನ್ ವೀಡಿಂಗ್‌-ರ ಆರೂ ಕವಿತೆಗಳನ್ನು ಮೂಲ ಎಸ್ಟೋನಿಯನ್‌-ನಿಂದ ಇಂಗ್ಲಿಷ್‌-ಗೆ ಮಿರಿಯಮ್ ಮ್ಯಾಕ್‌ಇಲ್ಫಾಟ್ರಿಕ್-ಕ್ಸೆನೊಫೊಂಟೊವ್-ರವರು (Miriam McIlfatrick-Ksenofontov) ಅನುವಾದಿಸಿದ್ದಾರೆ.

1
ಪಟ್ಟಿ
ಮೂಲ: List

ಹೃದಯ ಸರಿದು ಹೋಯಿತು,
ಬೇಸಗೆ ಸರಿದು ಹೋಯಿತು,
ಯಾವುದೂ ಇಳಿಯುವಂತೆ
ಕಾಣಲಿಲ್ಲ.

ಗಿರಣಿಗಾರ ಸರಿದು ಹೋದ,
ಉಗ್ರಾಣದ ಮಂದ ಬೆಳಕಿನಲ್ಲಿ
ಹಾಯಿಗಳನ್ನು ಬದಿಗೆ ಸೇರಿಸಿ
ಇಟ್ಟರು.

ಅಜ್ಜ ನೋಡುತ್ತಿದ್ದ,
ಅಜ್ಜಿ ನೋಡುತ್ತಿದ್ದಳು,
ಆನಂದ ಬಂತು ಕಣ್ಣಿಗೆ,
ಮುಚ್ಚಿದಾಗ.

ಅಪ್ಪನನ್ನು ಒಯ್ದರು,
ಅಮ್ಮನನ್ನು ಒಯ್ದರು,
ಮನೆಗೆ ಹೋದೆ ಒಬ್ಬನೆ
ಊಳೆಯಿಡುತ್ತಾ.

2
ಸರಳ ಪದ್ಯ
ಮೂಲ: Simple Poem

ಒಮ್ಮೆ ಖುಷಿಯು ಅಂಗಳದೊಳಗೆ ಬಂತು,
ಆಗ ಅಂಗಳಕ್ಕೆ ಎಷ್ಟು ಖುಷಿಯಾಯಿತು.
ನಂತರ ಖುಷಿಯು ಕೋಣೆಯೊಳಗೆ ಬಂತು,
ಆಗ ಕೋಣೆಗೆ ಎಷ್ಟು ಖುಷಿಯಾಯಿತು.

ಕೊನೆಗೆ ಖುಷಿಯು ಉಗ್ರಾಣದೊಳಗೆ ಬಂತು,
ಶೆಡ್ಡಿನೊಳಗೆ, ಕಣಜದೊಳಗೂ ಬಂತು,
ಅರಿವೆಗಳು ಸೂಟ್‌ಕೇಸೊಂದರಲ್ಲಿ ಸ್ವಲ್ಪ ಜಾಗ ಕಂಡವು.
ಆಮೇಲೆ ಹೊರಡುವ ಹೊತ್ತಾಯಿತು.

3
ಚಿತ್ರ
ಮೂಲ: Picture

ನಿನ್ನ ಎಲ್ಲೆಯೊಳಗೆ ಇರು, ಚಿತ್ರವೆ,
ನೋಡು ಮತ್ತೆ, ಚೌಕಟ್ಟನ್ನು ಮುರಿಯಬೇಡ.
ಎಲ್ಲಾ ಆಳಗಳೂ ಅಡಗಿವೆ ನಿನ್ನೊಳಗೇ,
ಒಂದಾನೊಂದು ದಿನ ನಾವು ನೋಡುವೆವು
ಅವನ್ನು, ಅವು ಇರುವ ಹಾಗೆ .

ಯಾವುದೂ ಮೇಲ್ಮೈಯಿಂದ ತಪ್ಪಿಸಿಕೊಳ್ಳಲ್ಲ,
ಮೂರು ಆಯಾಮದ್ದಾಗಿರಲಿ, ಹತ್ತಿರದ್ದಾಗಿರಲಿ, ದೂರದ್ದಾಗಿರಲಿ.
ನನ್ನೆದೆಯಲ್ಲಿ ಅಡಗಿರುವ ಎಲ್ಲಾ ಗುಪ್ತ ನಿಟ್ಟುಸಿರುಗಳೂ
ಈಗ ಹೇಗೂ ಬಯಲಾಗಿವೆ.

ಬೇಡ, ನಿನ್ನನ್ನು ನೀನು ಚೂರುಚೂರಾಗಿ ಹರಿದುಕೊಳ್ಳಬೇಡ –
ಯಾರೂ ನಿನ್ನನ್ನು ಮತ್ತೆ ಒಟ್ಟುಸೇರಿಸಲಾರರು.
ನಿರ್ವರ್ಣತೆ ಮತ್ತು ಮಿಂಚುದಾಳಿಗಳ ಮಧ್ಯೆ ಎಲ್ಲೋ
ನಮ್ಮನ್ನು ಒಟ್ಟುಸೇರಿಸುವುದು ಈ ಚಿತ್ರ.

ನಿನ್ನ ಚೌಕಟ್ಟಿನೊಳಗೆ ಇರು, ಚಿತ್ರವೆ,
ನೋಡು ಮತ್ತೆ, ಎಲ್ಲೆಗಳನ್ನು ಮೀರಬೇಡ,
ನೀನು ಎಲ್ಲಿಂದಲೋ ಮತ್ತೆ ಪ್ರತ್ಯಕ್ಷವಾಗುವೆ,
ಜಾದೂ ತಿರುವುಗಳನ್ನು ತಿರುಗುವೆ,
ವೆಸೂವಿಯಸ ಅಗ್ನಿಪರ್ವತದಂತೆ ಬಿಸಿಯಾಗಿರುವ ನಿನ್ನ ತಿರುಳು,
ಸುಡುವುದಿಲ್ಲ, ತಡವುತ್ತೆ.

ಈ ನಿರ್ಮಲ ನಿಷ್ಕಳಂಕ ತಾಣ –
ಅದೊಂದು ಆಸರೆ.
ಉಪಯೋಗಿಸಿಕೊ.

4
ಮುಂಜಾನೆ
ಮೂಲ: Morning

ಈ ಕತ್ತಲ ರಾತ್ರಿಯಲಿ ನಾನೊಂದು ಬಿಳಿಯ ಹಾಡುಹಕ್ಕಿಯ ಕಾಣುವೆ,
ಕೆಲವೊಮ್ಮೆ ನನ್ನ ಹೃದಯದೊಳಗೆ ಹೋಗುತ್ತದೆ ಅದು ಅಶ್ರುತವಾಗಿ.
ನನ್ನ ಹೃದಯದೊಳಗಿರುವ ಭಾರಿ ಬಂಡೆಯನ್ನು ಕುಟುಕಿ ತೆಗೆಯುತ್ತದೆ,
ಆಗ ತಾನೆ ನನಗೆ ಆ ಹೆಸರಿಲ್ಲದ ಹಕ್ಕಿಯ ಅರಿವಾಗುತ್ತದೆ.

ಈ ಕತ್ತಲ ರಾತ್ರಿಯಲಿ ನಾನೊಂದು ಬಿಳಿಯ ಹಾಡುಹಡಗೊಂದನ್ನು ಕಾಣುವೆ,
ಆ ಹಕ್ಕಿಯು ಹಡಗನ್ನು ಅಲ್ಲಿ ಎತ್ತರದಿಂದ ಹಿಡಿದಿಟ್ಟಿದೆ.
ಕೆಲವೊಮ್ಮೆ ಆ ಹಡಗು ನನ್ನ ಕಣ್ಣ-ಕಡಲೊಳಗೆ ಸರಿದುಹೋಗುತ್ತದೆ.
ಆಗ ತಾನೆ ಅದು ಹೆಸರಿಲ್ಲದ ಆಕಾಶವ ತೆರೆಯುತ್ತದೆ.

ಈ ಕತ್ತಲ ರಾತ್ರಿಯಲಿ ನಾನು ಬಿಳಿಯ ಮೊಂಬತ್ತಿ-ಬೆಳಕ ಕಾಣುವೆ,
ಆ ಹಕ್ಕಿ ಮತ್ತು ಆ ಹಡಗು ನನ್ನ ಚಿತ್ತದಿಂದ ಹಾರಿ ಹೋಗಿವೆ.
ಆಗ ಆ ಬೆಳಕಿನಲ್ಲಿ ಬಿಳಿಯ ಉಸಿರೊಂದು ಉದಯಿಸುತ್ತದೆ,
ಕತ್ತಲ ರಾತ್ರಿ ಮತ್ತು ಮೊಂಬತ್ತಿ ಆಚೆಗೆ ಬೀಸಿಹೋಗುತ್ತವೆ.

5
ಜೀವದ ಪ್ರಶ್ನೆ
ಮೂಲ: Question of Life

ಜನರೆಲ್ಲರೂ ಬರೀ ವಿರೋಧ-ದವರಾಗಿದ್ದರೆ,
ಪರ-ದವರಿಗೆ ದಾರಿಯೇ ಇಲ್ಲ.
ಆದರೂ ಮೋಡಗಳಿವೆ,
ಎರಡೂ ಕಡೆಯಿಂದ ಬೆಳಕಿದೆ.

ನನ್ನೊಳಗಿವೆ ತುಚ್ಛ ಯೋಚನೆಗಳು,
ಹೂವಿಲ್ಲ, ಕಾಂಡವೂ ಇಲ್ಲ.
ನೆತ್ತರು ಹೆಪ್ಪುಗಟ್ಟಬಹುದು
ಬರೀ ಇವುಗಳಿಂದಲೇ.

ನಮಗೆ ಎಷ್ಟೊಂದು ಕೊಡಲಾಗಿದೆ –
ಆದರೂ ನಾವು ಕಂಗೆಟ್ಟಿದ್ದೇವೆ.

ಏನು ಜೀವಂತವಾಗಿದೆಯೆಂದು ನೋಡುವ ಬಯಕೆ.
ಇದರ ನಿರೀಕ್ಷೆಯೂ ಹೆಚ್ಚೇನು?

6
ಒಂದು ಸಣ್ಣ ವಿಷಾದ
ಮೂಲ: A Tiny Regret

ಒಂದು ಸಣ್ಣ ವಿಷಾದ.
ಪ್ರತಿಯೊಂದು ಕಲ್ಪನೆಯು
ಮತ್ತೊಂದು ಭಾಷೆಗೆ ಅನುವಾದವಾಗದು ಎಂಬ ವಿಷಾದ.
ಇದು ಹಲವು ಯೋಚನೆಗಳನ್ನು ಹೊರಡಿಸುತ್ತದೆ,
ಎಲ್ಲವು ಎಲ್ಲರ ತಲೆಯೊಳಗೆ ಹೋಗುತ್ತವೆ,
ಎಲ್ಲವು ಎಲ್ಲ ನಾಲಿಗೆಗಳಿಗೆ ಹೊಂದುತ್ತವೆ.
ಸ್ವಲ್ಪ ಬೇಗನೆ ಮನಸ್ಸಿಗೆ ಹೊಳೆದಿದ್ದರೆ ಚೆನ್ನಾಗಿರುತ್ತಿತ್ತು.
ಹೊಳೆಯುತ್ತೆ, ಅದಕ್ಕೆ ಸಮಯ ಬಂದಾಗ ಹೊಳೆಯುತ್ತೆ.


*****