ಹೀಗೊಂದು ಆಸೆ
ಮೂರನೆ ಮಹಡಿಯ ಫ್ಲಾಟಿನ
ಬಾಲ್ಕನಿಗಂಟಿದ ನನ್ನ ಕೋಣೆಯಲಿ ಕೂತು
ಹಗಲಲ್ಲಿ ಓದು ಬರಹ ಅದೂ ಇದೂ
ಮಾಡುತ್ತಾ ...
ಎಷ್ಟೊಂದು ಸದ್ದು ಹೊರಗಿಂದ
ರಸ್ತೆಯಲಿ ಬರುವವರು ಮಾರುವವರು
ಬೆಳ್-ಬೆಳಗ್ಗೆ ಅನ್ವರ್ ಹೂವಿನಂವ
ಪಲ್ಯಾಕಾಯಿ ಮಾರುವವರಂತೂ ಸದಾ ಬರ್ತಿರ್ತಾರೆ
ಹಣ್ಣು ಮಾರುವವರೂ ಸಹ
ವಾರಕ್ಕೆ ಮೂರು ಸಲ ಮೀನಿನಂವ
ಗ್ಯಾಸ್ ರಿಪೇರಿಯಂವ
ಸೊಫಾ ರಿಪೇರಿಯಂವ
ಸೀರೆ, ಬಟ್ಟೆ, ಬೆಡಶೀಟ್ ಮಾರುವವರು ಬೇರೆ
ಒಂದೊಂದ್ಸಲ ಕತ್ತೆ ಹಾಲು ಮಾರುವವ ಕೂಡ
ಕತ್ತೇನ ಕರ್ಕೊಂಡೇ ಬಾರ್ತಾನೆ
ಎಲ್ಲ್ರದ್ದೂ ಬೊಬ್ಬೆಯೋ ಬೊಬ್ಬೆ
ಹೂವಿನ ಅನ್ವರ್ “ಚಾಮಂತಿ ಪೂಲ್ ... ಗುಲಾಬಿ ಪೂಲ್ ...” ಅಂತ ಕಿರುಚುತ್ತಾನೆ
ಗ್ಯಾಸ್ ಸ್ಟವ್ ರಿಪೇರಿ ಶೇಖರ್ ಮಾತನ್ನು ರೆಕಾರ್ಡ
ಮಾಡಿಸಿ ಸ್ಪೀಕರ ಮೂಲಕ ಕಿರುಚಿಸುತ್ತಾನೆ
ಕೆಲವರು ಕಿರುಚುತ್ತಾರೆ
ಕೆಲವರು ಸ್ಪೀಕರ್ ಮೂಲಕ ಕಿರುಚಿಸುತ್ತಾರೆ
ಕೆಲವರ ಕಿರುಚಾಟ ಅರ್ಥ ಆಗುತ್ತೆ
ಕೆಲವರ ಕಿರುಚಾಟ ಬರೀ ಕಿರುಚಾಟ
ಏನು ಮಾರುತ್ತಾರೋ ಏನೂ ಗೊತ್ತಾಗೊಲ್ಲ
ನನ್ನದೊಂದು ಆಸೆ ...
ಒಂದು ದೊಡ್ಡ ಬಟ್ಟೆ ಚೀಲವನ್ನು
ಬೆನ್ನಮೇಲೆ ಹಾಕಿಕೊಂಡು
ಯಾವುದೋ ದೂರದ ಅಪರಿಚಿತ
ಬಡಾವಣೆಗೆ ಹೋಗಿ
ಯಾರಿಗೂ ಅರ್ಥವಾಗದ ಯಾವುದೋ
ಒಂದು ಪದವನ್ನು ಜೋರು ಜೋರಾಗಿ
ಕಿರುಚುತ್ತಾ
ಸ್ವಲ್ಪ ವೇಳೆ ಸುಮ್ಮನೆ ಹೀಗೆಯೇ
ತಿರುಗಾಡಿ ಬರಬೇಕೆಂಬ ಆಸೆ.
ಅಲ್ವಾ ಮಾರಾಯ,
ಆಸೆಗೊಂದು ಅರ್ಥ ಬೇಡವಾ?
No comments:
Post a Comment