ಉದುರಾಟ
ನಿದ್ರೆಯ ಆಯಾಸದಿಂದ
ಎದ್ದು ಮೈ ಕೈ
ಮುರಿಯುತ್ತಿರುವಾಗ
ಕಟ ಕಟ ಸದ್ದಿನ ಜೋಡಿ
ಪಟ ಪಟ ಸದ್ದು
ಕೇಳಿ ಬಂತು
ಕಿವಿಗೊಟ್ಟು ಕೇಳಿದೆ
ಏನೋ ಪುಟಿಯುತ್ತಿದೆ
ಪಟ .... ಪಟ .... ಪಟಪಟ .... ಪಟ ....
ಒಂದಲ್ಲ, ಎರಡಲ್ಲ, ಸುಮಾ...ರು
ಕರ್ಟನ್ ಕೋಣೆಯ ಅರೆ ಕತ್ತಲು ಬೆಳಕಿನಲ್ಲಿ
ಬಗ್ಗಿ ನಲವ ನೋಡಿದೆ
ಮಂಕು ಮಂಕಾಗಿ ಕಂಡವು
ಸಣ್ಣ ಸಣ್ಣ ಗೋಲಿಯಾಕಾರದ
ಬಣ್ಣ ಬಣ್ಣದ ಮಣಿಗಳಂತೆ
ಪುಟಿಯುತ್ತಿದ್ದವು
ಪಟ .... ಪಟಪಟ ... ಪಟ .... ಪಟ ....
ಕನ್ನಡಕ ಏರಿಸಿ ನೋಡಿದೆ
ಸುಮಾರು ಹದಿನೈದು ಇಪ್ಪತು ಇರಬಹುದು
ಹೆಚ್ಚಿನವು ಬೂದು ಬಣ್ಣದ್ದು
ಒಂದೆರಡು ಕಂದು ಬಣ್ಣದ್ದು
ಕೆಲವು ಕಪ್ಪು ಬಣ್ಣದ್ದು
ಒಂದು ಬಿಳಿಯಾಗಿತ್ತು
ಒಂದೇ ಸಮ
ಪಟಪಟ .... ಪಟ .... ಪಟಪಟ .... ಪಟ ....
ಪುಟಿಯುತ್ತಿದ್ದವು
ಏನಿವು? ಎಲ್ಲಿಂದ ಬಂದವು?
ಹೇಗೆ ಬಂದವು?
ಕಟ ಕಟ ಮೈ ಕೈ ಮುರಿದಾಗ
ಗಂಟು ಕಟ್ಟು ಕತ್ತು ಪಕ್ಕೆಗಳಿಂದ
ಪಟ ಪಟ ಉದುರಿದ
ನೆಟಿಕೆಗಳಿರಬಹುದೋ?
ಪುಟಿಯುತ್ತಿದ್ದವು
ಪಟ .... ಪಟ .... ಪಟಪಟ .... ಪಟ ....
*****
No comments:
Post a Comment